ಮಜುಮ್‍ದಾರ್, ರಮೇಶಚಂದ್ರ
	1888-1980. ಇತಿಹಾಸ, ಸಂಸ್ಕøತಿ ಮತ್ತು ಪುರಾತತ್ವದ ಬಗ್ಗೆ ಹಲವಾರು ಕೃತಿ ಮತ್ತು ಸಂಶೋಧನ ಪ್ರಬಂಧಗಳನ್ನು ರಚಿಸಿದ ಶ್ರೇಷ್ಠ ಇತಿಹಾಸಕಾರ. 1888 ಡಿಸೆಂಬರ್ 4ರಂದು ಫರೀದ್‍ಪುರ ಜಿಲ್ಲೆಯ ಕಾಂದಾರಪಾಡದಲ್ಲಿ (ಈಗ ಬಾಂಗ್ಲಾದೇಶದಲ್ಲಿದೆ) ಹುಟ್ಟಿದರು. ತಂದೆ ಹಲಧರ ಮಜುಮ್‍ದಾರ್, ತಾಯಿ ವಿದುಮುಖಿದೇವಿ.

	ಕಾಂದಾರ್‍ಪಾಡದಲ್ಲಿಯ ಶಾಲೆಯಲ್ಲಿ ಏಳು ವರ್ಷಗಳ ಕಾಲ ಶಿಕ್ಷಣ. ತಮ್ಮ ಅಣ್ಣನ ಕೆಲಸ ಸ್ಥಳ ವರ್ಗಾವಣೆಯಿಂದಾಗಿ ವಿದ್ಯಾಭ್ಯಾಸಕ್ಕಾಗಿ ಊರಿಂದೂರಿಗೆ ಅಲೆದಾಟ. 1900ರಲ್ಲಿ ಕಲ್ಕತ್ತೆಗೆ ಬಂದು ಸೌತ್ ಸಬರ್ಬನ್ ಶಾಲೆ ಸೇರಿದರು. ಅನಂತರ ಡಾಕ್ಕಾ (1902), ಹೂಗ್ಲಿ (1903), ಕಲ್ಕತ್ತ (1904) ಮತ್ತು ಕಟಕ್ (1904-05) ನಗರಗಳಲ್ಲಿದ್ದರು. 1905ರಲ್ಲಿ ರ್ಯಾವೆನ್‍ಷಾ ಕೊಲೇಜಿಯೇಟ್ ಶಾಲೆಯಿಂದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವಿದ್ಯಾರ್ಥಿವೇತನ ಪಡೆದರು. ಮುಂದೆ ಕಲ್ಕತ್ತೆಗೆ ಬಂದು ರಿಪನ್ (ಆಗಿನ ಸುರೇಂದ್ರನಾಥ್) ಕಾಲೇಜಿಗೆ ಸೇರಿ ಫಸ್ಟ್ ಆಟ್ರ್ಸ್ ಪರೀಕ್ಷೆಯಲ್ಲಿ ಪ್ರಥಮವರ್ಗದಲ್ಲಿ ಉತ್ತೀರ್ಣರಾದರು. ಇತಿಹಾಸದಲ್ಲಿ ಬಿ.ಎ. (ಆನರ್ಸ್) ಗಾಗಿ ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜ್ ಸೇರಿ (1907) ದ್ವಿತೀಯ ವರ್ಗದಲ್ಲಿಯೂ ಮುಂದೆ ಅದೇ ಕಾಲೇಜಿನಿಂದ ಎಂ.ಎ (ಇತಿಹಾಸ) ಪ್ರಥಮ ದರ್ಜೆಯಲ್ಲಿಯೂ (1911) ಉತ್ತೀರ್ಣರಾದರು. ಬಳಿಕ ಕಾನೂನು ಪರೀಕ್ಷೆಯ ಪ್ರಥಮ ಭಾಗದಲ್ಲಿ ತೇರ್ಗಡೆಯಾಗಿ ಸ್ವಲ್ಪ ಸಮಯ ಕಲ್ಕತ್ತ ಹೈಕೋರ್ಟಿನಲ್ಲಿ ಗುಮಾಸ್ತರಾಗಿದ್ದರು. ಈ ವೃತ್ತಿ ಅವರಿಗೆ ಒಗ್ಗಲಿಲ್ಲ. ಹರಪ್ರಸಾದ ಶಾಸ್ತ್ರೀಯವರ ಸಂಪರ್ಕದಿಂದಾಗಿ ಇತಿಹಾಸ ಸಂಶೋಧನೆಯತ್ತ ಗಮನ ಹರಿಸಿದರು. ಪ್ರೇಮಚಂದ್ ರಾಯ್‍ಚಂದ್ ವಿದ್ಯಾರ್ಥಿವೇತನಕ್ಕೆ ಆಂಧ್ರ-ಕುಶಾನಯುಗದ (ಕ್ರಿ.ಪೂ.2ನೆಯ ಶತಮಾನದಿಂದ ಕ್ರಿ.ಶ. 2ನೆಯ ಶತಮಾನ) ಬಗ್ಗೆ ಪ್ರೌಢ ಪ್ರಬಂಧ ಸಲ್ಲಿಸುವ ಅರ್ಹತೆ ಪಡೆದರು. ಕುಶಾನಶಕೆಗೆ ಸಂಬಂಧಿಸಿದಂತೆ ಇವರು ಹೊಸ ಸಿದ್ಧಾಂತವನ್ನೇ ಮಂಡಿಸಿದರು.

	ಢಾಕ್ಕಾದ ಟೀಚರ್ಸ್ ಟ್ರೈನಿಂಗ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಬೋಧನ ವೃತ್ತಿ ಆರಂಭಿಸಿದರು (1913). 1921 ಜುಲೈನಿಂದ 1936 ಮಾರ್ಚ್ ತನಕ ಢಾಕ್ಕಾ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಇತಿಹಾಸ ಪ್ರಾಧ್ಯಾಪಕರಾಗಿದ್ದರು. 1937ರಲ್ಲಿ ಆ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಇತಿಹಾಸ ಪ್ರಾಧ್ಯಾಪಕರಾಗಿದ್ದರು. 1937ರಲ್ಲಿ ಆ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕಗೊಂಡು ನಿವೃತ್ತರಾಗುವತನಕ (1942 ಜೂನ್ 30) ಆ ಹುದ್ದೆಯಲ್ಲಿಯೇ ಮುಂದುವರಿದರು. ಇವರು ಕಲ್ಕತ್ತೆಯ ಹತ್ತಿ ಗಿರಣಿಯೊಂದರ ನಿರ್ದೇಶಕರೂ ಆಗಿದ್ದರು. ಅಲ್ಲಿಯ ವ್ಯವಹಾರಗಳು ಋಜುಪಥಚ್ಯುತವಾದುದರಿಂದ ಅದಕ್ಕೆ ರಾಜೀನಾಮೆ ನೀಡಿದರು. ಅನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಚ್ಯಶಾಸ್ತ್ರ ಕಾಲೇಜಿನ ಪ್ರಿನ್ಸಿಪಾಲರಾಗಿಯೂ ನಾಗಪುರ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಹೀಗೆ ಮಜುಮ್‍ದಾರ್ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು.

	ಸಮಗ್ರ ಸಂಶೋಧನ ಪ್ರಬಂಧವೊಂದಕ್ಕೆ ಇವರಿಗೆ ಗ್ರಿಫಿತ್ ಬಹುಮಾನ ಲಭಿಸಿತು. ಇದನ್ನೇ ಇವರು ಅಮೂಲಾಗ್ರವಾಗಿ ಪರಿಷ್ಕರಿಸಿ, ವಿಸ್ತರಿಸಿ ದಿ ಕಾರ್ಪೊರೇಟ್ ಲೈಫ್ ಇನ್ ಏನ್ಷೆಂಟ್ ಇಂಡಿಯ ಎಂಬ ಶೀರ್ಷಿಕೆಯಲ್ಲಿ ಪಿಎಚ್.ಡಿ. ಪದವಿಗಾಗಿ ಕಲ್ಕತ್ತ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ (1919) ಪದವಿ ಪಡೆದರು. ಕಲ್ಕತ್ತ ವಿಶ್ವವಿದ್ಯಾಲಯದಿಂದ ಪಿಎಸ್.ಡಿ. ಪಡೆದವರಲ್ಲಿ ಇವರು ಎರಡನೆಯವರು. ಮೊದಲನೆಯವರು ರಾಧಾ ಕುಮುದ್ ಮುಖರ್ಜಿ (1916). 

	ಇವರು ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ರಚನೆ ಕಾರ್ಯಯೋಜನೆಯ ನಿರ್ದೇಶಕರಾಗಿ, ಕಲ್ಕತ್ತೆಯ ಏಷ್ಯಾಟಿಕ್ ಸೊಸೈಟಿ ಅಧ್ಯಕ್ಷರಾಗಿ, ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕøತಿ ಮಾಲೆಯ ಸಂಪಾದಕರಾಗಿ, ವಂಗೀಯ ಸಾಹಿತ್ಯ ಪರಿಷದಧ್ಯಕ್ಷರಾಗಿ, ಮಾನವ ಜನಾಂಗದ ಇತಿಹಾಸ (ಸಾಂಸ್ಕøತಿಕ ಹಾಗೂ ವೈe್ಞÁನಿಕ ಅಭಿವೃದ್ಧಿ) ಪ್ರಕಟಣೆಯ ಅಂತಾರಾಷ್ಟ್ರೀಯ ಆಯೋಗದ ಉಪಾಧ್ಯಾಕ್ಷರಾಗಿ ಸೇವೆಸಲ್ಲಿಸಿದ್ದರು. ಇಸ್ತಾನ್‍ಬುಲ್‍ನಲ್ಲಿ ನಡೆದ 23ನೆಯ ಅಂತಾರಾಷ್ಟ್ರೀಯ ಓರಿಯಂಟಲಿಸ್ಟ್ಸ್ ಸಮ್ಮೇಳನದ ಪುರಾತತ್ವ ವಿಭಾಗದ ಅಧ್ಯಕ್ಷರಾಗಿದ್ದರು. ಷಿಕಾಗೋ (1958) ಮತ್ತು ಪೆನ್‍ಸಿಲ್ವೇನಿಯ ವಿಶ್ವ ವಿದ್ಯಾನಿಲಯಗಳಲ್ಲಿ ಭಾರತೀಯ ಇತಿಹಾಸ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು (1959). ಕ್ಯಾಂಬೆಲ್ ಚಿನ್ನದ ಪದಕ. ವಿಲಿಯಮ್ ಜೋನ್ಸ್ ಚಿನ್ನದ ಪದಕ. ಬಿ.ಸಿ.ಲಾ ಚಿನ್ನದ ಪದಕ, ರವೀಂದ್ರನಾಥ ಟಾಗೂರ್ ಶತಮಾನೋತ್ಸವ ಚಿನ್ನದ ಪದಕಗಳು ಇವರಿಗೆ ಲಭಿಸಿವೆ. ಪಶ್ಚಿಮಬಂಗಾಳದ ರವೀಂದ್ರ ಬಹುಮಾನ, ರವೀಂದ್ರ ಸ್ಮಾರಕ ಬಹುಮಾನ (ಕೇರಳ ವಿಶ್ವವಿದ್ಯಾನಿಯಲ), ಜಪಾನೀ ವರ್ತಮಾನ ಪತ್ರಿಕೆಯ ನಗದು (ರೂ.7500) ಬಹುಮಾನ, ಕೊಲ್ಹಾಪುರದ ಪ್ಯೂಯಲ್ ಇನ್‍ಸ್ಟ್ರುಮೆಂಟ್ ಅಂಡ್ ಎಂಜಿನಿಯರ್ಸ್ ಬಹುಮಾನ (ರೂ. 10,000) ಇವನ್ನು ಕೂಡ ಪಡೆದಿದ್ದಾರೆ. ಕಲ್ಕತ್ತ, ಜಾಧವಪುರ, ಬದ್ರ್ವಾನ್ ವಿಶ್ವವಿದ್ಯಾನಿಲಯಗಳ ಗೌರವ ಡಿ.ಲಿಟ್. ವಿಶ್ವಭಾರತಿಯ ದೇಶಿಕೋತ್ತಮ, ನಳಂದ ಮಹಾವೀರದ "ವಿದ್ಯಾವಾರಿಧಿ" ಕಲ್ಕತ್ತ ಸರ್ಕಾರಿ ಸಂಸ್ಕøತ ಕಾಲೇಜಿನ ಭಾರತತತ್ತ್ವ ಭಾಸ್ಕರ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ದತ್ತಿ ಉಪನ್ಯಾಸಗಳನ್ನು ನೀಡಿದ್ದಾರೆ. ಇಂಗ್ಲಿಷಿನಲ್ಲಿ ಮೂವತ್ತು ಮತ್ತು ಬಂಗಾಳಿಯಲ್ಲಿ ಹನ್ನೊಂದು ಕೃತಿಗಳನ್ನು ರಚಿಸಿರುವರು. ಹತ್ತು ಕೃತಿಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಭಾರತೀಯ ವಿದ್ಯಾಭವನದ ದಿ ಹಿಸ್ಟರಿ ಅಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್ ಮಾಲೆಯಲ್ಲಿ ಪ್ರಕಟವಾಗಿರುವ ಹನ್ನೊಂದು ಬೃಹತ್ಸಂ ಪುಟಗಳು. ಕಲ್ಕತ್ತೆಯ ರಾಮಕೃಷ್ಣ ಮಿಷನ್ ಇನ್‍ಸ್ಟಿಟ್ಯೂಟ್ ಆಫ್ ಕಲ್ಚರ್ ಪ್ರಕಟಿಸಿರುವ "ಕಲ್ಚರಲ್ ಹೆರಿಟೇಜ್ ಆಫ್ ಇಂಡಿಯಾ" ಮಾಲೆಯ ಸಂಪಾದಕರಾಗಿ ಇವರು ಸಲ್ಲಿಸಿದ ಸೇವೆ ಸ್ತುತ್ಯರ್ಹ. ಜೇವನೇರ್ ಸ್ಮøತಿದೀಪೇ ಎಂಬ ಆತ್ಮಕಥನವನ್ನು ಬಂಗಾಳಿಯಲ್ಲಿ ರಚಿಸಿದ್ದಾರೆ. ಇತಿಹಾಸ, ಶಾಸನಶಾಸ್ತ್ರ, ಪುರಾತತ್ವ, ಭಾಷೆ ಮತ್ತು ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಅಸಂಖ್ಯಾತ ಸಂಶೋಧನ ಲೇಖನಗಳನ್ನು ಪ್ರಕಟಿಸಿರುವರು. ಭಾರತ ಸರ್ಕಾರ ಚಲನ ಚಿತ್ರಗಳ ಸೆನ್ಸಾರ್ ಮಂಡಳಿಗೂ ಇವರನ್ನು ನಾಮಕರಣ ಮಾಡಿತ್ತು. 1968ರಲ್ಲಿ ಕಲ್ಕತ್ತೆಯ ಷರೀಫ್ ಆಗಿ ಆಯ್ಕೆಗೊಂಡಿದ್ದರು. 1980 ಫೆಬ್ರುವರಿ 11ರಂದು ನಿಧನರಾದರು.
(ಎನ್.ಎಸ್.ಎಸ್.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ